Tuesday, April 21, 2026
Home ಅಪರಾಧಮೊದಲ ಪೋಕ್ಸೋ ಪ್ರಕರಣ: ಮುರುಘಾ ಶರಣರು ಸೇರಿ ಮೂವರು ಆರೋಪಿಗಳು ದೋಷಮುಕ್ತ

ಮೊದಲ ಪೋಕ್ಸೋ ಪ್ರಕರಣ: ಮುರುಘಾ ಶರಣರು ಸೇರಿ ಮೂವರು ಆರೋಪಿಗಳು ದೋಷಮುಕ್ತ

by admin
0 comments

ಚಿತ್ರದುರ್ಗ/ದಾವಣಗೆರೆ: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಮೇಲಿನ ಮೊದಲ ಪೋಕ್ಸೋ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಶರಣರು ಹಾಗೂ ಇತರ ಇಬ್ಬರು ಆರೋಪಿಗಳನ್ನು ನಿರ್ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ.

ತೀರ್ಪಿನ ವಿವರ: ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಚನ್ನಬಸಪ್ಪ ಜಿ. ಹಡಪದ ಅವರು ಬುಧವಾರ ಮಧ್ಯಾಹ್ನ ಈ ಮಹತ್ವದ ತೀರ್ಪು ಪ್ರಕಟಿಸಿದರು. ಪ್ರಕರಣದ ಮೊದಲ ಆರೋಪಿ ಮುರುಘಾ ಶರಣರು, ಎರಡನೇ ಆರೋಪಿ ಮಠದ ಲೇಡಿ ವಾರ್ಡನ್‌ ರಶ್ಮಿ ಹಾಗೂ ಮಠದ ವ್ಯವಸ್ಥಾಪಕ ಪರಮಶಿವಯ್ಯ ಅವರುಗಳ ವಿರುದ್ಧದ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ ಅವರನ್ನು ದೋಷಮುಕ್ತಗೊಳಿಸಿ (Acquitted) ಆದೇಶ ನೀಡಲಾಗಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲಾಗಿತ್ತು. ಇಬ್ಬರು ಸಂತ್ರಸ್ತ ಬಾಲಕಿಯರು, ಮೂವರು ಆರೋಪಿಗಳು ಹಾಗೂ 14 ಸಾಕ್ಷಿಗಳ ಸುದೀರ್ಘ ವಿಚಾರಣೆ ನಡೆಸಿ, ನವೆಂಬರ್ 18 ರಂದು ವಾದ-ಪ್ರತಿವಾದ ಪೂರ್ಣಗೊಳಿಸಲಾಗಿತ್ತು.

ಹಿನ್ನೆಲೆ: 2022ರ ಆಗಸ್ಟ್ 26ರಂದು ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು. ಸೆಪ್ಟೆಂಬರ್ 1, 2022ರಂದು ಶರಣರನ್ನು ಬಂಧಿಸಲಾಗಿತ್ತು. ಸದ್ಯ ಮೊದಲ ಪ್ರಕರಣದಲ್ಲಿ ಖುಲಾಸೆಯಾಗಿದ್ದರೂ, ಶರಣರ ವಿರುದ್ಧ ದಾಖಲಾಗಿರುವ ಮತ್ತೊಂದು ಪೋಕ್ಸೋ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದ್ದು, ಅದು ಇನ್ನೂ ಇತ್ಯರ್ಥವಾಗಬೇಕಿದೆ.

ದಾವಣಗೆರೆಯಲ್ಲಿ ಶರಣರ ಮೌನ: ತೀರ್ಪು ಪ್ರಕಟವಾದ ಬಳಿಕ ಸಂಜೆ ದಾವಣಗೆರೆಗೆ ಆಗಮಿಸಿದ ಮುರುಘಾ ಶರಣರು, ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿದರು. ಅಲ್ಲಿ ಅಥಣಿ ಶಿವಯೋಗಿ ಹಾಗೂ ಜಯದೇವ ಸ್ವಾಮೀಜಿಗಳ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇನ್ನೂ ಒಂದಷ್ಟು ದಿನ ಮೌನ ಕಾಪಾಡಿಕೊಳ್ಳಬೇಕಿದೆ. ಮಾತನಾಡುವ ಸಂದರ್ಭ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪತ್ರಿಕಾಗೋಷ್ಠಿ ಕರೆದು ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತೇನೆ,” ಎಂದು ಹೇಳಿ, ಉಳಿದ ಪ್ರಶ್ನೆಗಳಿಗೆ ‘ನೋ ಕಾಮೆಂಟ್ಸ್’ ಎಂದರು. ಶರಣರು ದೋಷಮುಕ್ತರಾದ ಹಿನ್ನೆಲೆಯಲ್ಲಿ ಭಕ್ತರು ಸಿಹಿ ಹಂಚಿ ಸಂಭ್ರಮಿಸಿದರು.

You may also like

Leave a Comment