ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬೆಂಗಳೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಂದ 3.43 ಲಕ್ಷ ರೂಪಯಗಳ ಮೌಲ್ಯದ ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್ ಕದ್ದ ಆರೋಪಿಯನ್ನು ಬಂಧಿಸಿದ್ದಾರೆ. ಜಿಆರ್‌ಪಿ ಮತ್ತು ಆರ್‌ಪಿಎಫ್‌ನ ಜಂಟಿ ಕಾರ್ಯಾಚರಣೆ ಯಶಸ್ವಿ.
ದಾವಣಗೆರೆ: ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್ ಕಳವು ಮಾಡಿದ ಆರೋಪಿಯನ್ನು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 3.43 ಲಕ್ಷ ರೂಪಯಗಳ ಮೌಲ್ಯದ ಚಿನ್ನ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಳ್ಳುವಲ್ಲಿ ಜಿಆರ್‌ಪಿ ಹಾಗೂ ಆರ್‌ಪಿಎಫ್ ಪೊಲೀಸರ ತಂಡ ಯಶಸ್ವಿಯಾಗಿದೆ.
ಕಳವಿನ ವಿವರ:
ಕಳೆದ ಡಿಸೆಂಬರ್ 21ರಂದು ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯ ಎಂ. ವಿನಯ್ ಪ್ರಯಾಣಿಸುತ್ತಿದ್ದರು. ರಾತ್ರಿ ವೇಳೆ ನಿದ್ರೆಯಲ್ಲಿದ್ದ ವಿನಯ್‌ರ ಬಳಿಯಿದ್ದ ಚಿನ್ನಾಭರಣ, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಕಳವಾದದ್ದು ಎಚ್ಚರವಾದ ನಂತರ ಅವರಿಗೆ ತಿಳಿದುಬಂತು. ತಕ್ಷಣವೇ ಆನ್‌ಲೈನ್ ಮೂಲಕ ಆರ್‌ಪಿಎಫ್‌ಗೆ ದೂರು ನೀಡಿದ್ದರು.
ಜಂಟಿ ಕಾರ್ಯಾಚರಣೆ:
ದೂರು ಬಂದ ತಕ್ಷಣ ಪೊಲೀಸರು ‘ಆಪರೇಷನ್ ಯಾತ್ರಿ ಸುರಕ್ಷಾ’ ಅಡಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದರು. ಮಧ್ಯರಾತ್ರಿ 1.20 ಗಂಟೆಗೆ ರೈಲು ದಾವಣಗೆರೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಜಿಆರ್‌ಪಿ ಇನ್ಸ್‌ಪೆಕ್ಟರ್ ಕೃಷ್ಣ ನಾಯಕ್ ಹಾಗೂ ಆರ್‌ಪಿಎಫ್ ಇನ್ಸ್‌ಪೆಕ್ಟರ್ ರಂಜನ್ ಕುಮಾರ್ ಭಾರಧ್ವಜ್ ನೇತೃತ್ವದ ತಂಡ ರೈಲನ್ನು ಜಾಲಾಡಿತು. ತಪಾಸಣೆಯಲ್ಲಿ ಸಂಶಯಾಸ್ಪದವಾಗಿ ಕಂಡುಬಂದ ಮೊಹಮ್ಮದ್ ಅಮ್ಜದ್‌ನಿಂದ ಕಳವು ಮಾಡಿದ ವಸ್ತುಗಳು ಪತ್ತೆಯಾಗಿವೆ.
ನಂತರ ಆರೋಪಿಯನ್ನು ಬಂಧಿಸಿ ಜಿಆರ್‌ಪಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಂಡದ ಸದಸ್ಯರು:
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಆರ್‌ಪಿಎಫ್ ಸಬ್ ಇನ್ಸ್‌ಪೆಕ್ಟರ್ ಎ. ಕೆ. ರೆಡ್ಡಿ, ಜಿಆರ್‌ಪಿ ಎಎಸ್ಐ ಜಾನ್ ಕೊರಿಯೋ ಕೂಸ್, ಮುಖ್ಯ ಪೇದೆ ಟಿ. ಶಿವಾನಂದ್ ಹಾಗೂ ಸಿಬ್ಬಂದಿಗಳಾದ ದಿನೇಶ್ ಕುಮಾರ್, ಚೇತನ್, ಕಿರಣ್ ಮತ್ತು ಮಾಂತೇಶ್ ಪಾಲ್ಗೊಂಡಿದ್ದರು.
