ದಾವಣಗೆರೆ: ಪದವಿ ಪೂರ್ಣಗೊಳಿಸಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದ ಯುವಕನೊಬ್ಬ ನಿರಾಶೆಯಿಂದ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗುಡ್ಡದಲಿಂಗಣ್ಣನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಅಂಜಿನಪ್ಪ (26) ಎಂದು ಗುರುತಿಸಲಾಗಿದೆ. ಪದವಿ ನಂತರ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿದ್ದ ಆತ, ಹಲವು ವರ್ಷಗಳಿಂದ ರೂಂನಲ್ಲೇ ಓದಿನಲ್ಲಿ ತೊಡಗಿಸಿಕೊಂಡಿದ್ದ. ತನ್ನ ಶ್ರಮಕ್ಕೆ ಫಲ ಸಿಗುತ್ತಿಲ್ಲ ಎಂಬ ಬೇಸರವನ್ನು ಆತ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆಂದು ತಿಳಿದುಬಂದಿದೆ.
ಮನೆಯಲ್ಲಿ ಎಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಇರುವಂತ ಪರಿಸ್ಥಿತಿ ಕಂಡುಬಂದಿದ್ದು, ಕೆಲಸ ಸಿಗದಿರುವ ಒತ್ತಡದಿಂದ ಮಾನಸಿಕವಾಗಿ ಅಂಜಿನಪ್ಪ ನೊಂದಿದ್ದಾನೆಂದು ಕುಟುಂಬದವರು ತಿಳಿಸಿದ್ದಾರೆ.
ಕಳೆದ ರಾತ್ರಿ, ತಾಯಿ ಮೇಲ್ಮಹಡಿಯಲ್ಲಿ ಒಣಗಿಸಲು ಹಾಕಿದ್ದ ಸೀರೆಯನ್ನು ಬಳಸಿ ಆತ ನೇಣು ಬಿಗಿದುಕೊಂಡಿದ್ದಾನೆ. ರಾತ್ರಿ ಊಟಕ್ಕೆ ಕೆಳಗಿಳಿಯದಿದ್ದಾಗ ಮನೆಯವರು ಮಲಗಿದ್ದಾನೆಯೆಂದು ಭಾವಿಸಿದ್ದರು. ಬೆಳಿಗ್ಗೆಯೂ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಕುಟುಂಬದವರು ಕಿಟಕಿಯಿಂದ ನೋಡಿದಾಗ ಆತ ನೇಣು ಬಿಗಿದಿರುವುದು ಗಮನಕ್ಕೆ ಬಂದಿತು. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
