ದಾವಣಗೆರೆಯ ಮಹಾನಗರ ಪಾಲಿಕೆಯ ವಲಯ-1 ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಇ-ಸ್ವತ್ತು ಸೇರಿದಂತೆ ವಿವಿಧ ಸೇವೆಗಳಿಗೆ ಸಾರ್ವಜನಿಕರಿಂದ ಅತಿಯಾದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಈ ವೇಳೆ ಪಾಲಿಕೆ ಸಿಬ್ಬಂದಿಗಳ ಸಂಬಳ ವ್ಯವಹಾರಗಳ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ದಾವಣಗೆರೆಯ ರಾಜೀವ್ ಗಾಂಧಿ ಬಡಾವಣೆಯ ಕಚೇರಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ, ಸಿಬ್ಬಂದಿಗಳ ಸಂಬಳ, ಇಎಂಐ ಪಾವತಿ ಬಗ್ಗೆ ಪ್ರಶ್ನಿಸಲಾಯಿತು. ಅಲ್ಲದೆ, “ಸಂಬಳಕ್ಕಿಂತ ವಹಿವಾಟು ಹೆಚ್ಚಿದೆ” ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಪಾಲಿಕೆಯ ಪ್ರತಿಯೊಬ್ಬ ಸಿಬ್ಬಂದಿಯಿಂದಲೂ ವಿವರ ಕಲೆಹಾಕಲಾಗಿದೆ. ಅವರ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಲಾಗಿದೆ. ಎಂಟು ಮಂದಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಪ್ರಮುಖ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ.
