ಹರಿಹರ: ನಗರದ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಜ.15ರಂದು ಭವ್ಯವಾದ ಹರಜಾತ್ರಾ ಮಹೋತ್ಸವ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹರಜಾತ್ರೆಯ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಚನಾನಂದ ಸ್ವಾಮೀಜಿ, ಕಿತ್ತೂರ ರಾಣಿ ಚನ್ನಮ್ಮ ದ್ವಿ-ಶತಮಾನ ವಿಜಯೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಹಾಗೂ ಗುರುಪೀಠದ ಶ್ರೀಗಳ ಅಷ್ಟಮ ವಾರ್ಷಿಕ ಪೀಠಾರೋಹಣೋತ್ಸವದ ನಿಮಿತ್ತ ಸಾಧಕರೊಬ್ಬರಿಗೆ ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಶಸ್ತಿಗೆ ಯೋಗ್ಯ ಸಾಧಕರ ಆಯ್ಕೆಗಾಗಿ ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು. ಹರಜಾತ್ರಾ ಮಹೋತ್ಸವದಲ್ಲಿ ವಿವಿಧ ಮಠಾಧೀಶರು, ಸಚಿವರು, ಶಾಸಕರು, ಸಂಸದರು ಹಾಗೂ ಸಮಾಜದ ಗಣ್ಯರು ಭಾಗವಹಿಸಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಮಠದ ಮನವಿಯ ಮೇರೆಗೆ ಕಿತ್ತೂರ ರಾಣಿ ಚನ್ನಮ್ಮಾಜಿಯ ದ್ವಿ-ಶತಮಾನ ವಿಜಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ₹200 ಮುಖಬೆಲೆಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿರುವುದು ಸಂತಸ ತಂದಿದೆ ಎಂದರು.
ಉತ್ತರಾಯಣ ಪುಣ್ಯಕಾಲದಲ್ಲಿ ಸೂರ್ಯನ ಪಥ ಬದಲಿಸುವ ಮಕರ ಸಂಕ್ರಾಂತಿ ಹಬ್ಬದ ದಿನ ನಡೆಯುವ ಹರಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ್ರು, ಗುರುಪೀಠದ ಪ್ರಧಾನ ಟ್ರಸ್ಟಿ ಬಿ.ಸಿ.ಉಮಾಪತಿ, ಆಡಳಿತಾಧಿಕಾರಿ ಡಾ.ಎಚ್.ಪಿ.ರಾಜಕುಮಾರ್, ಹರಜಾತ್ರಾ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಾ.ಬಸವರಾಜ್ ವೀರಾಪುರ್ ಸೇರಿದಂತೆ ಪದಾಧಿಕಾರಿಗಳಾದ ಚಂದ್ರಶೇಖರ್ ಪೂಜಾರ್, ಪ್ರಕಾಶ್ ಪಾಟೀಲ್, ಸಂತೋಷ್ ಕುಮಾರ್, ರಶ್ಮಿ ಕುಂಕದ್, ರಾಜೇಶ್ವರಿ ಬಳ್ಳಾರಿ, ಸುಷ್ಮಾ ಪಾಟೀಲ್, ವೀರಣ್ಣ, ಬಸವರಾಜ್ ಉಪಸ್ಥಿತರಿದ್ದರು.
