Tuesday, April 21, 2026
Home ದಾವಣಗೆರೆಬೀಸುವ ಗಾಳಿಯಿಂದಲೇ ಬಾಟಲಿಗೆ ನೀರು ತುಂಬಿಸಬಹುದು!

ಬೀಸುವ ಗಾಳಿಯಿಂದಲೇ ಬಾಟಲಿಗೆ ನೀರು ತುಂಬಿಸಬಹುದು!

by admin
0 comments

 

ಬೀಸುವ ಗಾಳಿಯಿಂದಲೇ ಬಾಟಲಿಗೆ ನೀರು ತುಂಬಿಸಬಹುದು!

ದಾವಣಗೆರೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅನನ್ಯ ಸಂಶೋಧನೆ

ಗಾಳಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವುದು ಸಾಮಾನ್ಯ. ಗಾಳಿಯಲ್ಲಿ ನೀರಿನ ಅಂಶವಿದೆ ಎನ್ನುವುದೂ ಸತ್ಯ. ಆದರೆ ಗಾಳಿಯಿಂದಲೇ ಕುಡಿಯುವ ನೀರನ್ನು ಪಡೆಯಬಹುದೇ? ಇದು ಅಸಾಧ್ಯವಲ್ಲ ಎಂದು ದಾವಣಗೆರೆಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಹೊಸ ಸಂಶೋಧನೆಯ ಮೂಲಕ ಸಾಬೀತು ಮಾಡಿದ್ದಾರೆ. ಹೇಗೆ ಸಾಧ್ಯವಾಯಿತು ಈ ವಿಶಿಷ್ಟ ಸಾಧನೆ? ಇಲ್ಲಿದೆ ವಿವರ.

ದಾವಣಗೆರೆ, ನವೆಂಬರ್ 29:
ಒಂದು ಬಾಟಲ್ ಇಡಲಾಗಿದೆ; ಅದರಲ್ಲಿ ಹನಿ ಹನಿ ನೀರು ಜಮಾಗುತ್ತಿದೆ. ಆದರೆ ಈ ನೀರು ಯಾವುದೇ ಕೊಳವೆನೀರಲ್ಲ — ಗಾಳಿಯಿಂದಲೇ ಸಂಗ್ರಹವಾಗುತ್ತಿರುವುದು! ಕೇಳಲು ಅಚ್ಚರಿಯಾಗುವ ಈ ವಿನೂತನ ಆವಿಷ್ಕಾರವನ್ನು ದಾವಣಗೆರೆಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಮಾಡಿದ್ದಾರೆ.

ಗಾಳಿಯಿಂದ ನೀರು ಹೇಗೆ ಸಂಗ್ರಹಿಸುತ್ತಾರೆ?

ಕಾಲೇಜಿನ ಕಟ್ಟಡದ ಮೇಲ್ಚಾವಣಿಗೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ವಿದ್ಯುತ್ ಉತ್ಪಾದನೆ ಕೂಡ ನಡೆಯುತ್ತದೆ. ಈ ಪ್ಯಾನೆಲ್‌ಗಳ ಜೊತೆಗೆ ವಿಶೇಷ ಫ್ಯಾನ್‌ಗಳನ್ನು ಅಳವಡಿಸಿದ್ದು, ರಾತ್ರಿಯ ಗಾಳಿಯನ್ನು ಈ ಫ್ಯಾನ್‌ಗಳು ಸೆಳೆಯುತ್ತವೆ. ನಂತರ ಕಂಡೆನ್ಸರ್‌ಗಳ ಸಹಾಯದಿಂದ ಗಾಳಿಯಲ್ಲಿರುವ ತೇವಾಂಶವನ್ನು ನೀರಾಗಿ ಪರಿವರ್ತಿಸುತ್ತದೆ.
ಈ ತಂತ್ರಜ್ಞಾನದ ಬಗ್ಗೆ ಸಂಶೋಧನಾ ತಂಡದ ಮುಖ್ಯಸ್ಥರಾದ ಪ್ರೊ. ಶ್ರೀನಿವಾಸ ಅವರು ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.

ಅವರ ಮಾತಿನಲ್ಲಿ, ಬೇಸಿಗೆ ಕಾಲದಲ್ಲಿ ಅರಣ್ಯದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ದೊಡ್ಡ ಕೊರತೆ. ಇಂತಹ ತಂತ್ರಜ್ಞಾನವನ್ನು ಅರಣ್ಯ ಪ್ರದೇಶಗಳಲ್ಲಿ ಬಳಸಿದರೆ ಪ್ರಾಣಿಗಳಿಗೆ ನೀರಿನ ಸಮಸ್ಯೆ ನಿವಾರಣೆಯಾಗಬಹುದು. ಈ ಆಲೋಚನೆಯಿಂದಲೇ ನಾವು ಈ ಸಂಶೋಧನೆ ಆರಂಭಿಸಿದೆವು ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಕಡಿಮೆ ಪ್ರಮಾಣದ ಉಪಕರಣಗಳನ್ನು ಬಳಸಿ ಪ್ರಯೋಗಾತ್ಮಕವಾಗಿ ಈ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಆದ್ದರಿಂದ ನೀರು ಇನ್ನೂ ಸ್ವಲ್ಪ ಪ್ರಮಾಣದಲ್ಲೇ ಸಂಗ್ರಹವಾಗುತ್ತದೆ. ಪ್ರತಿ ದಿನ ಸುಮಾರು 10 ಲೀಟರ್ ನೀರು ಪಡೆಯುತ್ತಿದ್ದಾರೆ. ಆದರೆ ದೊಡ್ಡ ಪ್ರಮಾಣದ ವ್ಯವಸ್ಥೆ ಮಾಡಿದರೆ ಇನ್ನೂ ಹೆಚ್ಚಿನ ನೀರನ್ನು ಸಂಗ್ರಹಿಸಬಹುದಾಗಿದೆ ಎಂದು ತಂಡ ಹೇಳಿದೆ.

ಪ್ಯೂರಿಫೈಯರ್‌ಗಿಂತಲೂ ಹೆಚ್ಚು ಸ್ವಚ್ಛ ನೀರು!

ಸಂಗ್ರಹವಾಗುತ್ತಿರುವ ನೀರಿನ ಗುಣಮಟ್ಟವನ್ನೂ ಪರೀಕ್ಷಿಸಲಾಗಿದೆ. ಅದರ ಪ್ರಕಾರ, ಈ ನೀರು ತುಂಬಾ ಪರಿಶುದ್ಧ; ನಾವು ಮನೆಗಳಲ್ಲಿ ಕುಡಿಯುವ ಪ್ಯೂರಿಫೈಯರ್ ನೀರಿಗಿಂತಲೂ ಶುದ್ಧವಾಗಿದೆ ಎಂಬ ವರದಿ ಬಂದಿದೆ.

ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆಗೆ ತಂದರೆ ದೊಡ್ಡ ಪ್ರಯೋಜನವಾಗಬಹುದು. ಗಾಳಿ ಹೆಚ್ಚು ಬೀಸುವ ಪ್ರದೇಶಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಅಗತ್ಯ ಉಪಕರಣಗಳ ಬೆಲೆ ಕಡಿಮೆಯಾದರೆ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲೇ ಇಂತಹ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಆದರೆ ವಿದ್ಯಾರ್ಥಿಗಳ ಸಂಶೋಧನೆ ಮುಂದುವರಿಯಲು ಹಾಗೂ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಕೈಗಾರಿಕಾ ಕ್ಷೇತ್ರದ ಬೆಂಬಲ ಅತ್ಯಗತ್ಯ ಎಂದು ಕಾಲೇಜಿನ ಪ್ರಾಧ್ಯಾಪಕರು ಅಭಿಪ್ರಾಯಪಟ್ಟಿದ್ದಾರೆ.

 

You may also like

Leave a Comment