7 ಕಿ.ಮೀ ಉದ್ದದ ಕನ್ನಡ ಧ್ವಜದ ವಿಶ್ವದಾಖಲೆ ಪ್ರಯತ್ನ – ದಾವಣಗೆರೆ ಸಾಕ್ಷಿ ಆದ ಐತಿಹಾಸಿಕ ರಾಜ್ಯೋತ್ಸವ
ದಾವಣಗೆರೆ, ನವೆಂಬರ್ 28:
70ನೇ ಕನ್ನಡ ರಾಜ್ಯೋತ್ಸವವನ್ನು ಮತ್ತಷ್ಟು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು, ಬೆಣ್ಣೆ ನಗರಿ ದಾವಣಗೆರೆಯಲ್ಲಿ ಭವ್ಯ ವಿಶ್ವದಾಖಲೆ ನಿರ್ಮಾಣದ ಪ್ರಯತ್ನ ನಡೆದಿದೆ. ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಸಮಿತಿ – ದಾವಣಗೆರೆ ಜಿಲ್ಲಾ ಘಟಕದ ನೇತೃತ್ವದಲ್ಲಿ 7 ಕಿ.ಮೀ ಉದ್ದದ ಕನ್ನಡ ಧ್ವಜದ ಐತಿಹಾಸಿಕ ಮೆರವಣಿಗೆ ಇಂದು ನಡೆದಿದ್ದು, ಈ ಧ್ವಜವು ವಿಶ್ವದಾಖಲೆಗೆ ಸೇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
15 ಸಾವಿರ ವಿದ್ಯಾರ್ಥಿಗಳಿಂದ ಭವ್ಯ ಮೆರವಣಿಗೆ
ಬಾವುಟ ಮೆರವಣಿಗೆ ಗಾಂಧಿ ವೃತ್ತದಿಂದ ಆರಂಭವಾಗಿ ಗುಂಡಿ ಮಹಾದೇವಪ್ಪ ವೃತ್ತ, ಶಾರದಾಂಬ ದೇವಸ್ಥಾನ ವೃತ್ತ, ರಿಂಗ್ ರೋಡ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಪಿ.ಬಿ. ರಸ್ತೆ, ರೇಣುಕ ಮಂದಿರ, ಎವಿಕೆ ರಸ್ತೆ, ಚೇತನಾ ಹೋಟೆಲ್ ರಸ್ತೆ ಹಾಗೂ ಅಂಬೇಡ್ಕರ್ ವೃತ್ತಗಳ ಮೂಲಕ ಸಾಗಿತು. ಬಳಿಕ ಜಯದೇವ ವೃತ್ತದ ಮೂಲಕ ಬಾವುಟ ಮತ್ತೆ ಕೇಂದ್ರ ಸ್ಥಳಕ್ಕೆ ತಲುಪಿತು.
ಮೆರವಣಿಗೆಯಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅನೇಕ ಸಂಘ–ಸಂಸ್ಥೆಗಳ ಸದಸ್ಯರು ಬಾವುಟವನ್ನು ಹೊತ್ತೊಯ್ಯುವ ಕಾರ್ಯದಲ್ಲಿ ಭಾಗಿಯಾಗಿದ್ದರು. ನಗರದಲ್ಲಿನ 7 ಪ್ರಮುಖ ವೃತ್ತಗಳನ್ನು ದಾಟಿದ ಈ ಮೆರವಣಿಗೆ ನಿಜಕ್ಕೂ ಐತಿಹಾಸಿಕವಾಗಿ ನಡೆಯಿತು.
7 ಕಿ.ಮೀ ಉದ್ದದ ಧ್ವಜ ತಯಾರಿಸಿದ ತಂಡ
ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ನ ಮುಖ್ಯಸ್ಥ ಮೃಣಾಲ್ ಬಂಕಾಪುರ ಅವರ ನೇತೃತ್ವದಲ್ಲಿ ಈ ಏಳು ಕಿಲೋಮೀಟರ್ ಧ್ವಜವನ್ನು ತಯಾರು ಮಾಡಲಾಗಿದೆ. ಐದು ಮಂದಿ ಟೈಲರ್ಗಳು ಮತ್ತು ಹದಿನೈದು ಮಂದಿ ಸಹಾಯಕರು ಸೇರಿ ಒಟ್ಟು 20 ದಿನಗಳ ಕಾಲ ನಿರಂತರವಾಗಿ ಶ್ರಮಿಸಿ ಈ ಬೃಹತ್ ಧ್ವಜವನ್ನು ಸಿದ್ಧಪಡಿಸಿದ್ದಾರೆ.
ಪ್ರತಿ ಕಿ.ಮೀ.ಗೆ ಒಂದರಂತೆ ವಿಶೇಷ ಹೆಸರುಗಳೊಂದಿಗೆ 7 ಮಹಾದ್ವಾರಗಳನ್ನು ನಿರ್ಮಿಸಿ ಮೆರವಣಿಗೆಗೆ ಸಾಂಸ್ಕೃತಿಕ ಸ್ಪರ್ಶ ನೀಡಲಾಗಿದೆ.
ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನತ್ತ ದಾವಣಗೆರೆ
ಬಾವುಟದ ಮುಂದಿನ ಭಾಗದಲ್ಲಿ ಭುವನೇಶ್ವರಿ, ಇಮ್ಮಡಿ ಪುಲಕೇಶಿ, ಸಿದ್ದಗಂಗಾ ಮಠ, ಗಾಜಿನಮನೆ, ಸಂತೆಬೆನ್ನೂರು ಪುಷ್ಕರಣಿ ಹಾಗೂ ದಾವಣಗೆರೆ ಜಿಲ್ಲೆಯ ನಿರ್ಮಾತೃ ಜೆ.ಎಚ್. ಪಟೇಲ್ ಅವರ ಸ್ಥಬ್ದಚಿತ್ರ ಸೇರಿ ಒಟ್ಟು ಏಳು ಸ್ಥಬ್ದಚಿತ್ರಗಳು ಮೆರವಣಿಗೆಯನ್ನು ಇನ್ನಷ್ಟು ಭವ್ಯಗೊಳಿಸಿದವು.
ಏಳು ಕಿಲೋಮೀಟರ್ ಉದ್ದದ ಧ್ವಜವನ್ನು ಹೊತ್ತೊಯ್ಯುವ ಈ ಮೆರವಣಿಗೆಯನ್ನು ಕಣ್ತುಂಬಿಕೊಂಡ ದಾವಣಗೆರೆ ಜನರು ಅಪಾರ ಉತ್ಸಾಹ ವ್ಯಕ್ತಪಡಿಸಿದರು. ನಗರದಲ್ಲಿನ ಪ್ರಮುಖ ರಸ್ತೆಗಳು ಮದುವೆಯ ಹಬ್ಬದಂತೆ ಸಿಂಗರಿಸಿದ್ದವು.
