ಟೆಕ್ ಸಮ್ಮಿಟ್‌ನಲ್ಲಿ ‘ಐಟಿ–ಬಿಟಿ ಕ್ಲಸ್ಟರ್’ ಮಾನ್ಯತೆ
ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ದಾವಣಗೆರೆ ನಗರವನ್ನು ಅಧಿಕೃತವಾಗಿ ‘ಐಟಿ–ಬಿಟಿ ಕ್ಲಸ್ಟರ್’ ಎಂದು ಘೋಷಿಸಲಾಗಿದೆ. ಇದರಿಂದ ಐಟಿ ಕಂಪನಿಗಳು ದಾವಣಗೆರೆಯಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಲು ಹೊಸ ಅವಕಾಶಗಳು ತೆರೆದಿವೆ. ‘ವಿಷನ್ ದಾವಣಗೆರೆ’ ತಂಡದ ನಿರಂತರ ಪ್ರಯತ್ನ ಮತ್ತು ‘ಸೆವೆನ್ ಮಿನಿಟ್ ಸಿಟಿ’ ಪರಿಕಲ್ಪನೆ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.
ಇದುವರೆಗೆ ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ತುಮಕೂರು, ಹುಬ್ಬಳ್ಳಿ–ಧಾರವಾಡ ಮತ್ತು ಬೆಳಗಾವಿ ನಗರಗಳಿಗೆ ಮಾತ್ರ ಈ ಕ್ಲಸ್ಟರ್ ಮಾನ್ಯತೆ ಇತ್ತು. ಇನ್ನು ಮುಂದೆ ದಾವಣಗೆರೆಯೂ ಈ ಪಟ್ಟಿಗೆ ಸೇರಿರುವುದರಿಂದ, ಪ್ರತಿವರ್ಷ ಟೆಕ್ ಸಮ್ಮಿಟ್‌ನಲ್ಲಿ ದಾವಣಗೆರೆಯತ್ತವೂ ಕಂಪನಿಗಳ ಗಮನ ಸೆಳೆಯಲಿದೆ.
ದಾವಣಗೆರೆಯಲ್ಲಿ ಎಸ್‌ಟಿಪಿಐ ಕೇಂದ್ರ ಸ್ಥಾಪನೆಯಾಗಿ ನಾಲ್ಕು ವರ್ಷ ಕಳೆದರೂ, ಹಿಂದೆ ಕ್ಲಸ್ಟರ್ ಮಾನ್ಯತೆ ಇಲ್ಲದ ಕಾರಣ ಐಟಿ ಕಂಪನಿಗಳು ಇಲ್ಲಿ ನೆಲೆಯಾಗಿರಲಿಲ್ಲ. ಈಗ ಕ್ಲಸ್ಟರ್ ಸ್ಥಾನಮಾನ ದೊರೆತಿರುವುದರಿಂದ, ದಾವಣಗೆರೆಯಲ್ಲಿಯೂ ಐಟಿ ಸಮ್ಮಿಟ್‌ಗಳು ನಡೆಯುವ ಸಾಧ್ಯತೆ ಉಂಟಾಗಿದೆ ಮತ್ತು ಕಂಪನಿಗಳನ್ನು ಆಕರ್ಷಿಸಲು ಇದು ದೊಡ್ಡ ಹೆಜ್ಜೆ.
ಸತತ ಪ್ರಯತ್ನದ ಫಲ
ದಾವಣಗೆರೆಯಲ್ಲಿ ಐಟಿ ಪಾರ್ಕ್ ಸ್ಥಾಪಿಸುವ ಕಾರ್ಯ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಸಂಸದೆಯಾದ ನಂತರ ಡಾ. ಪ್ರಭಾ ಮಲ್ಲಿಕಾರ್ಜುನ್ ಈ ಪ್ರಯತ್ನಕ್ಕೆ ವೇಗ ನೀಡಿದರು.
‘ವಿಷನ್ ದಾವಣಗೆರೆ’ ತಂಡ ರಾಜ್ಯದ ವಿವಿಧ ಟೆಕ್ ಸಮ್ಮಿಟ್‌ಗಳಲ್ಲಿ ಪಾಲ್ಗೊಂಡು, ದಾವಣಗೆರೆಯ ಸಾಮರ್ಥ್ಯ ಮತ್ತು ಅವಕಾಶಗಳನ್ನು ಪ್ರಚಾರ ಮಾಡಿತು.
ಕಳೆದ ತಿಂಗಳು ಎಸ್‌ಟಿಪಿಐ ತಂಡ ದಾವಣಗೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರೂ, ಅವರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತು. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಸಿಇಒ ಸಂಜೀವ ಕುಮಾರ್ ಗುಪ್ತ ದಾವಣಗೆರೆಗೆ ಭೇಟಿ ನೀಡಿ, “ಮೈಸೂರು–ಮಂಗಳೂರು ಮಾದರಿಯಲ್ಲಿ ದಾವಣಗೆರೆಯಲ್ಲೂ ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆ” ಬಗ್ಗೆ ಚಿಂತನೆ ಇದೆ ಎಂದು ಹೇಳಿದರು.
ಈ ಬಾರಿ ಟೆಕ್ ಸಮ್ಮಿಟ್‌ನಲ್ಲಿ ದಾವಣಗೆರೆಗೆ ಮಳಿಗೆ ತೆರೆಯಲ್ಪಟ್ಟಿದ್ದು ಇದೇ ಮೊದಲ ಬಾರಿಗೆ. ‘ವಿಷನ್ ದಾವಣಗೆರೆ’ ತಂಡ ನಗರದಲ್ಲಿ ಐಟಿ ಹೂಡಿಕೆಗಳಿಗೆ ಇರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿತು. ಇದರ ಫಲವಾಗಿ ದಾವಣಗೆರೆ ಐಟಿ–ಬಿಟಿ ಕ್ಲಸ್ಟರ್ ಎಂಬ ಗೌರವವನ್ನು ಪಡೆದುಕೊಂಡಿದೆ. ‘ಬಿಯಾಂಡ್ ಬೆಂಗಳೂರು’ ಯೋಜನೆಗೆ ಇದು ಪ್ರಮುಖ ಹೆಜ್ಜೆ.
‘ಸೆವೆನ್ ಮಿನಿಟ್ ಸಿಟಿ’ – ದಾವಣಗೆರೆಯ ಹೊಸ ಪರಿಚಯ
ದಾವಣಗೆರೆ ನಗರವನ್ನು ‘ಸೆವೆನ್ ಮಿನಿಟ್ ಸಿಟಿ’ ಎಂದು ಪರಿಚಯಿಸುವ ಮೂಲಕ ಐಟಿ ಕಂಪನಿಗಳನ್ನು ಸೆಳೆಯಲು ಪ್ರಯತ್ನ ನಡೆದಿದೆ.
ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ ತಲುಪಲು ಕೇವಲ 7 ನಿಮಿಷ ಸಾಕು ಎಂಬ ವಿಶಿಷ್ಟತೆಯನ್ನು ತಂಡ ಹೈಲೈಟ್ ಮಾಡಿದೆ.
ಪೂರಕ ಶಿಕ್ಷಣ ಸಂಸ್ಥೆಗಳು, ಉತ್ತಮ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಸಂಪರ್ಕದ ಬಗ್ಗೆ ರಾಜ್ಯ ಮತ್ತು ಕೇಂದ್ರ ಐಟಿ ಸಚಿವಾಲಯಗಳ ಗಮನ ಸೆಳೆಯಲಾಗಿದೆ ಎಂದು ವಿಷನ್ ದಾವಣಗೆರೆಯ ವೀರೇಶ್ ಪಟೇಲ್ ತಿಳಿಸಿದ್ದಾರೆ.
ಐಟಿ ಪಾರ್ಕ್‌ಗೆ ಬಳಸಬಹುದಾದ ಪ್ರಮುಖ ಕಟ್ಟಡಗಳು:
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮೇಲಂತಸ್ತು
ಯುಬಿಡಿಟಿ ಕಾಲೇಜಿನ ಮೂಲಸೌಕರ್ಯ
ಸ್ಮಾರ್ಟ್ ಸಿಟಿ ಕಟ್ಟಡ
ಜೆಎಚ್ ಪಟೇಲ್ ಬಡಾವಣೆಯ ಎಸ್‌ಟಿಪಿಐ ಕೇಂದ್ರ
ಕ್ಲಸ್ಟರ್ ಘೋಷಣೆಯ ಬಳಿಕ ಐಟಿ–ಬಿಟಿ ಕಂಪನಿಗಳು ದಾವಣಗೆರೆಗೆ ಬರುವ ದಾರಿಯು ಇನ್ನಷ್ಟು ಸುಗಮವಾಗಿದೆ. ಸಮ್ಮಿಟ್‌ನಲ್ಲಿ ಹಲವು ಕಂಪನಿಗಳೊಂದಿಗೆ ಸಭೆ ನಡೆಸಿ ದಾವಣಗೆರೆಗೆ ಆಹ್ವಾನ ನೀಡಲಾಗಿದೆ ಎಂದು ಸಂಸದ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಎಸ್‌ಟಿಪಿಐ ಪಾರ್ಕ್‌ಗೆ ಭೂಮಿ ಹಸ್ತಾಂತರ
ವಡ್ಡಿನಹಳ್ಳಿ ಬಳಿ ಸ್ಥಾಪಿಸಲಾಗುವ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ (ಎಸ್‌ಟಿಪಿಐ)ಗಾಗಿ ಕಾಯ್ದಿರಿಸಿದ ಭೂಮಿಯ ಮಂಜೂರಾತಿ ಆದೇಶವನ್ನು ಟೆಕ್ ಸಮ್ಮಿಟ್ ವೇದಿಕೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಎಸ್‌ಟಿಪಿಐ ನಿರ್ದೇಶಕ ಅರವಿಂದ್ ಅವರಿಗೆ ಹಸ್ತಾಂತರಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಸಂಸದ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆಯಂತೆ ‘ವಿಷನ್ ದಾವಣಗೆರೆ’ ತಂಡ ಈ ಕಾರ್ಯದಲ್ಲಿ ಭಾಗವಹಿಸಿತು.
ಎಸ್‌ಟಿಪಿಐ ಪ್ರಾದೇಶಿಕ ನಿರ್ದೇಶಕ ಸಂಜಯ್ ತ್ಯಾಗಿ ಮತ್ತು ತಂಡದವರು ಎರಡು ತಿಂಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ್ದರು.
